ಕ್ರೇಕ್, ಡಿನಾ ಮರಿಯಾ ಮುಲಾಕ್ 
	1826-1887. ಆಂಗ್ಲ ಕಾದಂಬರಿಗಾರ್ತಿ. ಮಕ್ಕಳಿಗಾಗಿ ಅನೇಕ ಕಥೆ, ಕವನಗಳನ್ನೂ ಬರೆದಿದ್ದಾಳೆ. ಹುಟ್ಟಿದ್ದು ಸ್ಟೋಕಾನ್‍ಟ್ರೆಂಟ್‍ನಲ್ಲಿ. ಈಕೆಯ ತಂದೆ ಥಾಮಸ್ ಮುಲಾಕ್ ಇಲ್ಲಿ ಪಾದ್ರಿಯಾಗಿದ್ದ. 1865ರಲ್ಲಿ ಈಕೆ ಜಾರ್ಜ್ ಲಿಲ್ಲಿಕ್ರೇಕ್ ಎಂಬ ಪ್ರಕಾಶಕನನ್ನು ಮದುವೆಯಾದಳು. 1849ರಲ್ಲಿ ದಿ ಆಗಿಲ್ವೀಸ್ ಎಂಬ ಈಕೆಯ ಮೊದಲ ಕಾದಂಬರಿ ಪ್ರಕಟವಾಯಿತು. ಅನಂತರ ಆಲಿವ್ (1850), ದಿ ಹೆಡ್ ಆಪ್ ದಿ ಫ್ಯಾಮಿಲಿ (1851), ಅಗಾಥಾಸ್ ಹಸ್ಬೆಂಡ್ (1853) ಕಾದಂಬರಿಗಳು ಪ್ರಕಟವಾದುವು. ಆ ವೇಳೆಗೆ ಪ್ರತಿಭಾವಂತ ಲೇಖಕಿ ಎನಿಸಿಕೊಂಡು ಹ್ಯಾಂಸ್ಟೆಡ್‍ನಲ್ಲಿ ವಾಸಿಸತೊಡಗಿದಳು. 1857ರಲ್ಲಿ ಪ್ರಕಟವಾದ ಜಾನ್ ಹ್ಯಾಲಿಫಾಕ್ಸ್, ಜಂಟಲ್‍ಮನ್ ಈಕೆಯ ಜನಪ್ರಿಯ ಕಾದಂಬರಿ. ಅನಂತರ ಎ ಲೈಫ್ ಫಾರ್ ಎ ಲೈಫ್ (1859), ಕ್ರಿಶ್ಚನ್ಸ್ ಮಿಸ್ಟೇಕ್ (1865) ಎಂಬ ಕಾದಂಬರಿಗಳು ಹೊರಬಂದವು. ದಿ ಅಡ್ವೆಂಚರ್ಸ್ ಆಫ್ ಎ ಬ್ರೌನಿ (1872), ದಿ ಲಿಟ್ಲ್ ಲೇಮ್ ಪ್ರಿನ್ಸ್ - ಇವು ಈಕೆ ಮಕ್ಕಳಿಗಾಗಿ ಬರೆದ ಸುಂದರವಾದ ಕಥೆಗಳು. 1881ರಲ್ಲಿ ಪೊಯಮ್ಸ್ ಆಫ್ ಥರ್ಟಿ ಇಯರ್ಸ್, ನ್ಯೂ ಅಂಡ್ ಓಲ್ಡ್ ಕೃತಿ ಪ್ರಕಟಗೊಂಡಿತು. ಮಕ್ಕಳಿಗಾಗಿ ಸುಂದರ ಕಥೆಗಳನ್ನು ಹೆಣೆಯುವುದರಲ್ಲೂ ಕಾದಂಬರಿಗಳಲ್ಲಿ ಆಂಗ್ಲರ ಪದ್ಧತಿ ಹಾಗೂ ನೀತಿ ನಿಯಮಗಳನ್ನು ಚೆನ್ನಾಗಿ ಚಿತ್ರಿಸುವುದರಲ್ಲೂ ಹೆಸರಾಗಿದ್ದಾಳೆ.						 (ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ